ನಿಂಬಾರ್ಕ
	ವೈಷ್ಣವ ಮತಾಚಾರ್ಯರಲ್ಲಿ ಒಬ್ಬ. ಉತ್ತರ ಪ್ರದೇಶ ಮತ್ತು ಬಂಗಾಳಗಳಲ್ಲಿ ಇಂದಿಗೂ ಈತನ ಅನುಯಾಯಿಗಳನ್ನು ಕಾಣಬಹುದು. ಈತನ ಕಾಲ ರಾಮಾನುಜರಿಗಿಂತ ಈಚೆ ಮತ್ತು ಮಧ್ವಾಚಾರ್ಯರಿಗಿಂತ ಹಿಂದೆ ಅಂದರೆ ಸುಮಾರು 1200 ಎಂದು ವಿದ್ವಾಂಸರ ಅಭಿಪ್ರಾಯ. ಈತ ತೆಲುಗು ಬ್ರಾಹ್ಮಣನೆಂಬ ಪ್ರತೀತಿ. ಈತನ ಸಂಪ್ರದಾಯಕ್ಕೆ ಸನಕ ಅಥವಾ ಸನಕಾದಿ ಸಂಪ್ರದಾಯವೆಂಬ ಹೆಸರಿದೆ. ಈ ಮತಾನುಯಾಯಿಗಳು ರಾಧಾ-ಕೃಷ್ಣರ ಉಪಾಸನೆ ಮಾಡುವುದಲ್ಲದೆ ಗೋಪಿಚಂದನವನ್ನಿಡುತ್ತಾರೆ.

	ಈತನೂ ಮಿಕ್ಕ ಮತಾಚಾರ್ಯರಂತೆ ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದಿದ್ದಾನೆ. ಅದರ ಹೆಸರು ವೇದಾಂತ ಪಾರಿಜಾತ ಸೌರಭ. ಈತನದು ದ್ವೈತಾದ್ವೈತ ಸಿದ್ಧಾಂತ. ಇದನ್ನು ಸ್ವಾಭಾವಿಕ ಭೇದಾಭೇದವೆನ್ನುವುದೂ ಉಂಟು. ಮುಂದೆ ಈ ಭಾಷ್ಯದ ಮೇಲೆ ಅನೇಕ ಟೀಕೆ ಟಿಪ್ಪಣಿಗಳು ರಚಿತವಾಗಿವೆ. ಈತ ಬರೆದ ಪ್ರಕರಣ ಗ್ರಂಥದ ಹೆಸರು ಸಿದ್ಧಾಂತರತ್ನ ಅಥವಾ ದಶಶ್ಲೋಕಿಂ. ಈತನ ಸಿದ್ಧಾಂತ ಮುಖ್ಯವಾಗಿ ರಾಮಾನುಜಾಚಾರ್ಯರಿಂದ ಪ್ರಭಾವಿತವಾಗಿರುವಂತಿದೆ. ಜೀವನಿಗೂ ಜಗತ್ತಿಗೂ ಒಂದು ರೀತಿಯ ಸ್ವತಂತ್ರ ಅಸ್ತಿತ್ವ ಇದೆ ಎನ್ನುವುದನ್ನು ರಾಮಾನುಜರಂತೆ ಈತ ಒಪ್ಪಿದರೂ ಪಾರಮಾರ್ಥಿಕವಾಗಿ ಅದ್ವೈತದ ತತ್ತ್ವವನ್ನು ಕೈಬಿಡುವುದಿಲ್ಲ. ಹೀಗೆ ಇದೂ ಒಂದು ರೀತಿಯ ವಿಶಿಷ್ಟಾದ್ವೈತದ್ದೇ ಆಗಿದೆ. ಭಗವಂತನ ಶಕ್ತಿಯ ಪರಿಣಾಮರೂಪವಾಗಿ ಮತ್ರ ಜೀವಜಗತ್ತುಗಳು ಬ್ರಹ್ಮನಿಂದ ಭಿನ್ನವೆಂಬಂತೆ ಭಾಸವಾಗುತ್ತವೆ; ಆದರೆ ಮೂಲತಃ ಒಂದೇ. ರಾಮಾನುಜರಂತೆಯೇ ನಿಂಬಾರ್ಕನೂ ಮೋಕ್ಷಸಾಧನೆಯಲ್ಲಿ ಭಕ್ತಿಯ ಪ್ರಾಮುಖ್ಯವನ್ನು ಒತ್ತಿ ಹೇಳುತ್ತಾನೆ. ಈತನ ದರ್ಶನದಲ್ಲಿ ಕೃಷ್ಣ, ಚಿತ್, ಅಚಿತ್- ಈ ಮೂರೇ ತತ್ತ್ವಗಳು ಎದ್ದು ನಿಲ್ಲುತ್ತವೆ.
(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ